SearchBrowseAboutContactDonate
Page Preview
Page 34
Loading...
Download File
Download File
Page Text
________________ ಉಪೋದ್ಘಾತ | ೨೯ ಕೈಗನ್ನಡಿಯಂತಿವೆ. ಇವುಗಳನ್ನು ಪ್ರತ್ಯೇಕವಾಗಿ ಓದಿದರೆ ಸ್ವತಂತ್ರ ಭಾವಗೀತೆಗಳಂತೆಯೇ ಇವೆ. ಇವನ್ನು ಓದುವಾಗ ಭಾರತವನ್ನು ಓದುತ್ತಿರುವ ಅರಿವೇ ಇರುವುದಿಲ್ಲ. ಚಿತ್ರದ ಮೇಲೆ ಚಿತ್ರ, ಏಕಪ್ರಕಾರವಾದ ಚಿತ್ರಪಟದ ಸುರುಳಿಯನ್ನು ಬಿಚ್ಚಿದಂತೆ ಕಣ್ಣುಮುಂದೆ ಹಾದು ಹೋಗಿ ಕಣ್ಮನಗಳನ್ನು ತೃಪ್ತಿಗೊಳಿಸಿ ವಾಚಕರನ್ನು ಮುಗ್ಧರನ್ನಾಗಿಸುವುವು. ಮುಂದೆ ಅರ್ಜುನನೂ ಸುಭದ್ರೆಯೂ ಇಂದ್ರಪ್ರಸ್ಥವನ್ನು ಪ್ರವೇಶಿಸುವುದು, ಸುಭದ್ರಾವಿವಾಹ, ಅಭಿಮನ್ಯುವಿನ ಜನನ, ಮೃಗಯಾವಿಹಾರ-ಇವೇ ಮೊದಲಾದುವು ಬಹು ರಸಭರಿತವಾಗಿಯೂ ಮಿತಿಯರಿತೂ ವರ್ಣಿತವಾಗಿವೆ. ಮುಂದೆ ಅರ್ಜುನನ ಅನ್ಯಾದೃಶವಾದ ಪೌರುಷವನ್ನು ವ್ಯಕ್ತಗೊಳಿಸುವ ಖಾಂಡವದಹನದ ದೃಶ್ಯ ಕಣ್ಣಿಗೆ ಬೀಳುವುದು. ಇಲ್ಲಿ ಕವಿಯು ಪ್ರಸ್ತುತವಿಷಯವನ್ನು ಮನದಟ್ಟಾಗುವಂತೆ ವರ್ಣಿಸುವ ವೈಖರಿಯೂ ಗ್ರಹಿಸಲಸಾಧ್ಯವಾದುದನ್ನು ಶಬ್ದಗಳ ಸಂವಿಧಾನದಿಂದ ಚಿತ್ರಿಸುವ ನೈಪುಣ್ಯವೂ ಬಹು ಶ್ಲಾಘನೀಯವಾಗಿವೆ. ಇನ್ನು ಮೇಲೆ ಕಥೆಯು ಹೆಚ್ಚು ವ್ಯತ್ಯಾಸವಾಗದೆ ಯಥಾಕ್ರಮವಾಗಿ ರಾಜಸೂಯಾರಂಭದಿಂದ ಪಾಂಡವರ ಅರಣ್ಯಪ್ರವೇಶದವರೆಗೆ ಬಹು ಜಾಗ್ರತೆಯಿಂದ ಸಾಗುವುದು. ಮೂಲಭಾರತದ ಪ್ರಕಾರ ಧರ್ಮನಂದನನು ಅರಣ್ಯಪ್ರವೇಶ ಮಾಡಿದೊಡನೆಯೇ ಋಷಿಗಳು ಬಂದು ಧರ್ಮೋಪದೇಶವನ್ನು ಮಾಡಬೇಕು. ಪಂಪನು ಈ ರಗಳೆಯನ್ನು ಬಿಟ್ಟಿದ್ದಾನೆ. ಹೇಗೂ ಹನ್ನೆರಡು ವರ್ಷಗಳು ಕಳೆಯಬೇಕು. ಅದಕ್ಕಾಗಿ. ಕೆಲವು ಆಖ್ಯಾನಗಳನ್ನು ಮಾತ್ರ ಪಂಪನು ನಿರೂಪಿಸುವನು. ಇಷ್ಟರಲ್ಲಿ ಅರ್ಜುನನು ಇಂದ್ರಕೀಲದಲ್ಲಿ ತಪಸ್ಸುಮಾಡಿ ಶಿವನಿಂದ ಪಾಶುಪತಾಸ್ತವನ್ನು ಪಡೆದು ಬರುವನು. ಮುಂದೆ ಅಜ್ಞಾತವಾಸ, ಗೋಗ್ರಹಣ, ಕೃಷ್ಣದೌತ್ಯ, ಯುದ್ದನಿರ್ಣಯ ಮೊದಲಾದವುಗಳೆಲ್ಲ ಸಂಕ್ಷೇಪವಾಗಿಯೂ ಲಲಿತವಾಗಿಯೂ ನಿರೂಪಿತವಾಗಿವೆ. . ಇವೆಲ್ಲ ಹತ್ತು ಆಶ್ವಾಸಗಳಲ್ಲಿ ಮುಗಿಯುವುವು. ಪಂಪನು ಮುಂದಿನ ಆಶ್ವಾಸಗಳನ್ನು ಪೂರ್ಣವಾಗಿ ಯುದ್ಧಕ್ಕಾಗಿಯೇ ಉಪಯೋಗಿಸಿಕೊಂಡಿರುವನು. ಮನಸ್ಸು ಮಾಡಿದ್ದರೆ ಇದನ್ನು ಇನ್ನೂ ಕಡಮೆಮಾಡಬಹುದಾಗಿತ್ತು. ಆದರೆ ಸಾಹಸಾಭರಣನ ಯುದ್ಧಕೌಶಲವನ್ನು ವಿಸ್ತಾರವಾಗಿ ವರ್ಣಿಸಬೇಕೆಂದೋ ಸಮಸ್ತ ಭಾರತವನ್ನು ತಪ್ಪದೇ ಹೇಳಬೇಕೆಂದೋ ಯುದ್ಧರಂಗದಲ್ಲಿ ತನಗಿದ್ದ ಅಪಾರವಾದ ಪರಿಚಯವನ್ನು ಪ್ರದರ್ಶನ ಮಾಡಬೇಕೆಂದೋ ಆ ಭಾಗವನ್ನು ವಿಸ್ತರಿಸಿದ್ದಾನೆ. ಈ ಭಾಗದಲ್ಲಿಯೇ ಭಾರತದ ಪ್ರಭಾವವ್ಯಕ್ತಿಗಳಾದ ಭೀಷ್ಮ, ದ್ರೋಣ, ಕರ್ಣ, ದುರ್ಯೊಧನ, ದುಶ್ಯಾಸನ, ಶಲ್ಯ, ಅರ್ಜುನ, ಭೀಮ, ಧರ್ಮರಾಯ, ಅಭಿಮನ್ಯು, ಸೈಂಧವ, ಶ್ವೇತ ಮೊದಲಾದವರ ಉದ್ದಾಮ ಸಾಹಸದ, ಔನ್ನತ್ಯದ, ಮಹಾನುಭಾವತ್ವದ, ತ್ಯಾಗದ ವಿವಿಧ ಪರಿಚಯಗಳು ಮನದಟ್ಟಾಗುವುದು. ಕೌರವರ ಪಕ್ಷದ ವೀರಾಧಿವೀರರೆಲ್ಲರೂ ಯುದ್ಧರಂಗದಲ್ಲಿ ಮಡಿಯುವರು. ಪಾಂಡವರಿಗೆ ಜಯವು ಲಭಿಸುವುದು. ಅರ್ಜುನನ ಪಟ್ಟಾಭಿಷೇಕದೊಂದಿಗೆ ಕಾವ್ಯವು ಪರಿಸಮಾಪ್ತಿ ಗೊಳ್ಳುವುದು,
SR No.034022
Book TitleVikramarjuna Vijayam
Original Sutra AuthorN/A
AuthorPampa
PublisherKannada Sahitya Parishattu
Publication Year2016
Total Pages792
LanguageKannada
ClassificationBook_Other & Kavya
File Size139 MB
Copyright © Jain Education International. All rights reserved. | Privacy Policy